ಪರಮಾತ್ಮ ಚಿತ್ರವು ಟೈಟಲ್ ಇಂದಲೇ ಬಹಳ ಪ್ರಚಾರ ಗಿಟ್ಟಿಸಿದ ಚಿತ್ರ ಎಂದು ಹೇಳಬಹುದೇನೋ...ಪರಮಾತ್ಮ ಪದದ ಅಪಾರ ಅರ್ಥಗಳು, ಪರಮಾರ್ಥಗಳು, ನಾನಾರ್ಥಗಳು ಮತ್ತು ಅಪಾರ್ಥಗಳನ್ನು ಅರಿತಿರುವ ಕರ್ನಾಟಕ ಜನಸಮುದಾಯವು ಯೋಗರಾಜ ಭಟ್ಟರಂಥಾ "ಯೋಗರಾಜ"ರು ಪರಮಾತ್ಮನ ಹುಡುಕಾಟ ನಡೆಸಿ ಅವನ ದರ್ಶನವನ್ನು ಮಾಡಿಸಿ ತಮ್ಮನ್ನು ಪುನೀತಗೊಳಿಸಿಬಿಡುತ್ತಾರೆ ಎಂಬ ಆಸೆಯಿಂದ ಕಾದಿದ್ದರು. ಅಂಥಾ ಭವ್ಯ ದಿವ್ಯ ಪಾವನ ಶ್ರೀಸಾಮಾನ್ಯರಲ್ಲಿ ನಾನೂ ಒಬ್ಬಳು. ಚಿತ್ರ ಬಿಡುಗಡೆಯಾಗಿದ್ದು ಗುರುವಾರ, ೬ನೇ ತಾರೀಖು ಅಕ್ಟೋಬರ್ ನಲ್ಲಿ.ಪರಮಾತ್ಮನ ನೋಡಲು ಕಾತುರದಿಂದ ಶುಕ್ರವಾರಕ್ಕೇ ಟಿಕೆಟ್ಟು ಕೊಡಿಸಿ ಎಂದು ಪತಿ ಪರಮೇಶ್ವರರನ್ನು ಪ್ರಾರ್ಥಿಸಿದ ನಂತರ, ಗೋಪಾಲನ್ ಮಾಲಿನಲ್ಲಿ ಪರಮಾತ್ಮನ ದರ್ಶನಕ್ಕೆ ಪತಿದೇವರು ವ್ಯವಸ್ಥೆ ಮಾಡಿದರು.
ಯೋಗರಾಜರ ಭಟ್ಟರ ಚಿತ್ರಗಳನ್ನು ಥಿಯೇಟರ್ ನಲ್ಲಿ ನೋಡಿದ್ದುದರಲ್ಲಿ ಇದು ಮೂರನೆಯದು. ಮೊದಲನೆಯದು, ಅಫ್ ಕೋರ್ಸ್, ಮುಂಗಾರು ಮಳೆ.ನೂರನೆಯ ದಿನದಂದು ಹೋಗಿ ನೋಡಿದ್ದಾಯ್ತು. ಗಾಳಿಪಟವನ್ನು ಕಾರಣಾಂತರಗಳಿಂದ ಥಿಯೇಟರಿನಲ್ಲಿ ನೋಡಲಾಗಲಿಲ್ಲ. ಮನಸಾರೆಗೆ ಹೋಗುವಷ್ಟರಲ್ಲಿ ಥಿಯೇಟರಿನವರು ಅದನ್ನು ಎತ್ತಂಗಡಿ ಮಾಡುವ ಮನಸ್ಸು ಮಾಡಿದ್ದರು, ಹಾಗಾಗಿ ಅದೂ ಕೈತಪ್ಪಿತು. ಆದ್ದರಿಂದ ಪಂಚರಂಗಿ ಬಿಡುಗಡೆ ಆದಾಗ, ಶ್ರದ್ಧಾ ಭಕ್ತಿಗಳಿಂದ ಮೊದಲ ವಾರದಲ್ಲೇ ಥಿಯೇಟರ್ ಮುಂದೆ ಸಾಲಲ್ಲಿ ನಿಂತು, ಬಾಲ್ಕನಿಗೆ ಟಿಕೆಟ್ ಕೊಳ್ಳಲು ಆದ ನೂಕು ನುಗ್ಗಲಿನಲ್ಲಿ ನನ್ನನ್ನು ನಾನು ಸಂಭಾಳಿಸಿಕೊಂಡು ಟಿಕೆಟ್ ಪಡೆದು, ಹೋಗಿ ನೋಡಿಕೊಂಡು ಬಂದೆ. ಪರಮಾತ್ಮ ಬಿಡುಗಡೆಯಾದಾಗ ಇನ್ನೂ ಮುಂದುವರೆಯಬೇಕೆಂದು ನಿರ್ಧರಿಸಿ ಎರಡನೆಯ ದಿನವೇ ಹೋದೆ. ಈ ಮೂರೂ ಚಿತ್ರಗಳನ್ನು ಯೋಗರಾಜರು ವಿವಿಧ ಆಯಾಮಗಳಲ್ಲಿ ನಿರ್ದೇಶಿಸಿದ್ದರು,ವಿಭಿನ್ನ ಕಥಾನಿರೂಪಣ ಶೈಲಿಗೆ ಹೆಸರಾದವರು. ಜೋಗ ಜಲಪಾತಕ್ಕೆ ಹೊಸ ಆಯಾಮ ನೀಡಿದವರು. ಆದ್ದರಿಂದ ಯೋಗರಾಜರ ಚಿತ್ರವೆಂದರೆ ಅದು ನಿಜವಾಗಿಯೂ ಡಿಫರೆಂಟ್ ಆಗಿಯೇ ಇರುತ್ತದೆ ಎಂದು ನಂಬಿದ ಅವರ ಅಭಿಮಾನಿ ವರ್ಗದಲ್ಲಿ ನಾನೂ ಒಬ್ಬಳು.
ಪುನೀತ್ ರಾಜ್ ಕುಮಾರ್ ಅವರ ಚಿತ್ರ ಪಕ್ಕಾ ಸಾಂಸಾರಿಕ ಚಿತ್ರಗಳಾಗಿದ್ದ ಕಾಲದಿಂದಲೂ ನಾನು ಪುನೀತ್ ಚಿತ್ರಗಳನ್ನು ನೋಡುತ್ತಿದ್ದೆ.ಗಟ್ಟಿಯಾದ ಕಥಾವಸ್ತುಗಳನ್ನು ಹೊಂದಿರುತ್ತಿದ್ದ ಪುನೀತ್ ಅಭಿನಯದ ಚಿತ್ರಗಳನ್ನು ಇಷ್ಟಪಟ್ಟವರಲ್ಲಿ ನಾನೂ ಒಬ್ಬಳು. ಯೋಗರಾಜ ಮತ್ತು ಪುನೀತ್ ಒಟ್ಟಿಗಿರುವ ಚಿತ್ರವಾದ ಪರಮಾತ್ಮ ಇವೆರಡು ಕಾರಣಗಳಿಂದ ನನ್ನ ಗಮನ ಸೆಳೆದಿತ್ತು.
ಪರಮಾತ್ಮ ಚಿತ್ರ ಪರಮಾತ್ಮನ ತರಹವೇ ಇತ್ತು. ಸುಲಭಕ್ಕೆ ಅರ್ಥವಾಗದ ಹಾಗೆ.
ಪಂಚರಂಗಿ ಚಿತ್ರ ಬಿಡುಗಡೆಯಾದಾಗಲೇ ನಾನು ಮತ್ತು ನನ್ನ ಸ್ನೇಹಿತೆ ಕೇವಲ ಮೂರು ಘಂಟೆಗಳ ಕಾಲ ಫೋನಿನಲ್ಲಿ ಈ ಚಿತ್ರದ ಬಗ್ಗೆ ವಿಮರ್ಶೆ ನಡೆಸಿದ್ದೆವು. ಪಂಚರಂಗಿ ಚಿತ್ರವನ್ನು ಎರಡು ಆಯಾಮಗಳಿಂದ ವೀಕ್ಷಿಸಬೇಕೆಂದು ನಾವು ವಿಮರ್ಶಿಸಿದೆವು. ಗಟ್ಟಿ ಕತೆಯ ಹಪಹಪಿಕೆಯಿಂದ ಹೊರಬಂದು ಕೇವಲ ಟೈಂ ಪಾಸಿಗಾಗಿ ನೋಡಿ ವಿಡಂಬನೆಯಲ್ಲಿ ಅಡಗಿರುವ ಸತ್ಯದ ದರ್ಶನ ಮಾಡಬೇಕೆಂದು ಭೌತ ಶಾಸ್ತ್ರಜ್ಞೆ ನಾನು ಅರ್ಥೈಸಿದ್ದರೆ, ಮನಸ್ಸಿನಲ್ಲಾಗುವ ವಿವಿಧ ಬದಲಾವಣೆಗಳನ್ನು "ಪಂಚರಂಗಿ" ಎಂದು ಇಮೇಜೆರಿಯಾಗಿ ಬಳಸಲಾಗಿದೆ ಎಂದು ಸಮಾಜ ಶಾಸ್ತ್ರಜ್ಞೆ ಅವಳು ಅರ್ಥೈಸಿದ್ದಳು. ಪರಮಾತ್ಮ ಚಿತ್ರಕ್ಕೂ ಇದೇ ವ್ಯಾಖ್ಯಾನವನ್ನು ಸ್ವಲ್ಪ ಮಟ್ಟಿಗೆ ಅಳವಡಿಸಿಕೊಳ್ಳಬಹುದು. ಪರಮಾತ್ಮ ಚಿತ್ರದಲ್ಲಿ ಗಟ್ಟಿ ಕಥೆ ಎಂಬುದು ಏನೂ ಇಲ್ಲ. ಅದೊಂದು Jigsaw puzzle ತರಹ. ಪಜ಼ಲ್ಲಿನ ಎಲ್ಲಾ ಬಿಡಿ ಬಿಡಿ ಚೂರುಗಳನ್ನು ಒಟ್ಟು ಸೇರಿಸಿದರೆ ಅದೊಂದು abstract ಭಾವನೆ ಕೊಡುತ್ತದೆಯೇ ಹೊರತು, ಇದೊಂದು ಕಥೆ ಎಂದು ಅನ್ನಿಸುವುದಿಲ್ಲ. ಅಧ್ಯಾತ್ಮದಲ್ಲಿ ಪರಮಾತ್ಮ ಎಂಬುದನ್ನು ಅವರು "abstract entity" ಎಂದು ಅರ್ಥೈಸಿ ಅದನ್ನೇ ಇಲ್ಲೂ ಅಳವಡಿಸಿದ್ದಾರಾ ? ಅದು ಗೊತ್ತಿಲ್ಲ. ಒಂದು ವೇಳೆ ಹಾಗಿಲ್ಲದಿದ್ದರೆ, ಈ ಚಿತ್ರವನ್ನು ದೃಶ್ಯಗಳ ಕಲಾತ್ಮಕ ಜೋಡಣೆ ಎಂದಷ್ಟೇ ಹೇಳಬಹುದು.
ಯೋಗರಾಜ ಭಟ್ಟರಂಥಾ satirical ನಿರ್ದೇಶಕರು ಪರಮಾತ್ಮನನ್ನೂ satirical ಆಗಿಯೇ ನೋಡಿದ್ದಾರೆಂದು ನಾನು ಅಭಿಪ್ರಾಯ ಪಡುತ್ತೇನೆ. ಪರಮಾತ್ಮ ಪದದ ಬಗ್ಗೆ ಇರುವ ನಾನಾರ್ಥಗಳನ್ನು ಸಮಯೋಚಿತವಾಗಿ ಬಳಸುವಲ್ಲಿ ಯಶಸ್ವಿ ಆಗಿರುವ ಭಟ್ಟರು ಚಿತ್ರಕ್ಕೆ ಸಂಪೂರ್ಣವಾದ ಒಂದು ಅರ್ಥ ಕೊಡುವಲ್ಲಿ ಸೋತಿದ್ದಾರೆ. ಚಿತ್ರದ ಕಡೆಯಲ್ಲಿ ಭಟ್ಟರು "ಪರಮ" ಎನ್ನುವ ವ್ಯಕ್ತಿಯಲ್ಲಿ ತನ್ನ ಪತ್ನಿಯ ಆತ್ಮ ಸೇರಿ "ಪರಮಾತ್ಮ"ನಾದನು ಎಂದು ನಾವು ಭಾವಿಸಬೇಕೇ ಎಂಬ ಪ್ರಶ್ನೆಗೆ ಭಟ್ಟರೇ ಉತ್ತರಿಸಬೇಕು. ಟೈಂ ಪಾಸ್ ಆಯಾಮದಿಂದ ಈ ಚಿತ್ರವನ್ನು ನೋಡಿದರೆ ಇದು ಸಂಪೂರ್ಣ ಟೈಂ ಪಾಸೇ.
ಅಧ್ಯಾತ್ಮಿಕ ಆಯಾಮದಿಂದ ಪರಮಾತ್ಮ ಚಿತ್ರವನ್ನು ನೋಡುವ ಪ್ರಯತ್ನ ಮಾಡಬಹುದೋ ಇಲ್ಲವೋ ಗೊತ್ತಿಲ್ಲ. ನನ್ನ ಬುದ್ಧಿಯನ್ನು ಉಪಯೋಗಿಸದೇ ಸರಿಸುಮಾರು ಆರುತಿಂಗಳು ಕಳೆದಿತ್ತಾದ್ದರಿಂದ ಇರಲಾರದೇ ತಲೆಗೆ ಹುಳು ಬಿಟ್ಟುಕೊಂಡು ಯೋಚನೆ ಮಾಡತೊಡಗಿದೆ.ಏನು ಮಾಡುವುದು ? ರಾಮಕೃಷ್ಣಾಶ್ರಮದ ಎಸ್.ಎಲ್.ವಿ ಮತ್ತು ಬ್ರಾಹ್ಮಣರ ಕಾಫಿ ಕೇಂದ್ರದ ಇಡ್ಲಿ ವಡೆಗಳನ್ನು ತಿಂದು ಬೆಳೆದ ದೇಹ ! ಯೋಚನೆ ಮಾಡಿಯೇಬಿಟ್ಟಿತು ನನ್ನ ತಲೆಯೂ !! ನನಗೆ ಹುಟ್ಟಿದ ಪ್ರಶ್ನೆಗಳಿವು:
೧.ಚಿತ್ರದಲ್ಲಿ ಪರಮಾತ್ಮ ಎಂಬ ಹೆಸರಿನ ವ್ಯಕ್ತಿ ತಾನೇನೇ ಸಾಧನೆ ಮಾಡಿದರೂ ತೃಪ್ತನಾಗಿ ಕಾಣದೇ ಇರುವುದು ಆನಂದ ಸ್ವರೂಪನಾದ ಪರಮಾತ್ಮನನ್ನು ನಿರಂತರವಾಗಿ ಹುಡುಕುವ ಸಂಕೇತವಾಗಿರಬಹುದೇ ?
೨."ಹುಟ್ಟೆಲ್ಲಿ ?" ಎಂದು ನಾಯಕಿ ಕೇಳುವ ಪ್ರಶ್ನೆಗೆ ನಾಯಕ " ಕೆ.ಸಿ ಜೆನರಲ್ ಆಸ್ಪತ್ರೆ" ಎಂದು ಉತ್ತರಿಸುತ್ತಾನೆ. ನಿಜವಾಗಿ ನಾಯಕಿ ದೋಣಿಯ ಹರಿಗೋಲು (ಹುಟ್ಟು) ಕೇಳುತ್ತಿರುತ್ತಾಳೆ. ಈ ದ್ವಂದ್ವಾರ್ಥವನ್ನು ವಿಸ್ತರಿಸಬಹುದಾದರೆ, ಐಹಿಕ ಮತ್ತು ಪಾರಮಾರ್ಥಿಕವಾಗಿ ಹುಟ್ಟು ಎಂಬ ಪದವನ್ನು ಇಲ್ಲಿ ಬಳಸಲಾಗಿದೆಯೇ ?
೩."ಕತ್ತ್ಲಲ್ಲಿ ಕರಡಿಗೆ ಜಾಮೂನು ತಿನಿಸೋಕೆ ಯಾವತ್ತು ಹೋಗ್ಬಾರ್ದು ರೀ " ಹಾಡು ಮೇಲ್ನೋಟಕ್ಕೆ ಹಾಸ್ಯಮಯವಾಗಿ ಕಂಡರೂ ನಾವು ನಮ್ಮ ಜೀವನದಲ್ಲಿ "Back up plans" ಇಟ್ಟುಕೊಂಡರೆ ಎಷ್ಟರ ಮಟ್ಟಿಗೆ ಅದು ಸಾಧು, ಸಮಂಜಸ ಮತ್ತು ನ್ಯಾಯಬದ್ಧ ಎಂಬ ನೈತಿಕ ಪ್ರಶ್ನೆಗಳನ್ನು ಏಳಿಸುವ ಹಾಡಾಗಿದೆ. ನಾವು ಮೋಹದಿಂದ ಅಷ್ಟು ಸುಲಭಕ್ಕೆ ಹೊರಬರಲಾರೆವು ಎಂಬ ಸಂಕೇತವನ್ನು ಭಟ್ಟರು ಈ ಹಾಡ ಮೂಲಕ ನೀಡಹೊರಟಿರುವರೇ ?
೪.ಪರಮಾತ್ಮನ ಸ್ನೇಹಿತರನ್ನು ಪರಮಾತ್ಮ ಎಂದಿಗೂ ಅವರ ಹೆಸರಿನಿಂದ ಕರೆಯದೇ, ಅವರ ಗುಣಸ್ವಭಾವಕ್ಕೆ ತಕ್ಕಂತೆ ಹೆಸರುಗಳನ್ನು ಇಟ್ಟಿರುವುದು ಗಮನಾರ್ಹ. "ಹೆಸರಲ್ಲೇನಿದೆ ? ಗುಣವು ಮನುಷ್ಯನ ನಿಜವಾದ ಹೆಸರು" ಎಂದು ಇದು ಸೂಚಿಸುತ್ತದೆಯೇ ?
೫.ಕಡೆಗೂ ಪರಮಾತ್ಮ ಯಾರ ಕೈಗೂ ಸಿಗದ ವಸ್ತು ಎಂದು ತೋರಿಸಲಿಕ್ಕೆ ಇಬ್ಬರು ನಾಯಕಿಯರನ್ನು ಇಟ್ಟು, ಒಬ್ಬಳು ಸತ್ತು ಮತ್ತೊಬ್ಬಳನ್ನು ಬೇರೊಬ್ಬರ ಜೊತೆ ಮದುವೆ ಮಾಡಿಸಿ ಪರಮಾತ್ಮ ಎಂದಿಗೂ ಒಬ್ಬನೇ ಎಂಬ ವಾಕ್ಯಕ್ಕೆ ಈ ತರಹ ಹೊಸ ಅರ್ಥವನ್ನು ನೀಡಲಾಗಿದೆಯೇ ?
ಹುಟ್ಟು-ಸಾವು, ಹಾಸ್ಯ- ಆಟ, ಕೋಪ-ಸವಾಲು,ಡುಡಿಮೆ-ನೆಲೆ, ಕಾಮ-ಪ್ರೇಮ, ತಂದೆ-ಮಗಳ ಸಂಬಂಧ, ಮಗಳ ಮದುವೆಯ ಸಮಯದಲ್ಲಿ ತಂದೆಯ ಮನಸ್ಸಲ್ಲಾಗುವ ತೊಳಲಾಟ ಎಲ್ಲವೂ ಸಾಮಾನ್ಯ. ಅದನ್ನು ಮೀರಿದವನು ಪರಮಾತ್ಮ ಎಂಬುದನ್ನು ಈ ಚಿತ್ರದಲ್ಲಿ ಅತಿ ಸೂಚ್ಯವಾಗಿ ತೋರಿಸುವ ಮೂಲಕ ಭಟ್ಟರು ತಮ್ಮ ವಿಶಿಷ್ಟ ಜಾಣ್ಮೆಯನ್ನು ಮೆರೆದಿದ್ದಾರೆ. ಹಾಡುಗಳು ಯಥಾಪ್ರಕಾರ ಅವರ Trump card ಆಗಿವೆ.
ನನಗೆ ಅರ್ಥವಾಗದ್ದು ಇಷ್ಟು:
೧. ECG report ಗಳ ಔಚಿತ್ಯ.
೨. ನಾಯಕಿಯ ನಿರಂತರ ನಗು.
ಚಿತ್ರಕ್ಕೆ ಇಷ್ಟೇನೆ ಅರ್ಥಾನಾ...?
ಯಾವನಿಗೊತ್ತು.. ಯಾವನಿಗೊತ್ತು ?!
skip to main |
skip to sidebar
ನಾನು ನೋಡಿದ ಚಿತ್ರಗಳ,ಕೇಳಿದ ಹಾಡುಗಳ ಬಗೆಗಿನ ನನ್ನ ಅಭಿಪ್ರಾಯ, ನನ್ನದೇ ಶೈಲಿಯಲ್ಲಿ.
ಪರಮಾತ್ಮನನ್ನು ಅರ್ಥೈಸುತ್ತಾ...
Posted by
Lakshmi Shashidhar Chaitanya
on Wednesday, November 16, 2011
/
Comments: (0)
Blog Archive
Total Pageviews
Copyright 2009
ಸಿನಿ-ಕತೆ
| All rights reserved | Distributed by
Blogger Templates
Blogger Templates created by Deluxe Templates
Wordpress Theme by EZwpthemes
Blogger Templates created by Deluxe Templates
Wordpress Theme by EZwpthemes