RSS

ಶ್ರೀದೇವಿ

ಶ್ರೀದೇವಿ ಎಂದರೆ ನಮ್ಮ ಬಾಲ್ಯದ dance role model, ಯುವಕರ dream girl. ಪ್ರಾಯಶಃ ಹೇಮ ಮಾಲಿನಿಯ ನಂತರ ಜನ ಇವರ ಸೌಂದರ್ಯಕ್ಕೆ ಸೆರೆ ಸಿಕ್ಕಿದ್ದು, ರೂಪಕ್ಕೆ ಮಾರು ಹೋಗಿದ್ದು, ಕಣ್ಣೋಟದ ಬಾಣಗಳಿಗೆ ಗಾಯಗೊಂಡಿದ್ದು.

ನನ್ನ ಓರಗೆಯ ಹುಡುಗಿಯರಲ್ಲಿ ಪ್ರಾಯಶಃ "ಹವಾ ಹವಾಯೀ" ಹಾಡಿಗೆ ಗ್ರೂಪ್ ಡಾನ್ಸ್ ಅಥವಾ ಸೋಲೋ ಡಾನ್ಸ್ ಮತ್ತು "ಮೇರೆ ಹಾಥೋ ಮೆ ನೌ ನೌ ಚೂಡಿಯಾ ಹೈ" ಗೆ ಡಾನ್ಸ್ ಮಾಡದ ಹುಡುಗಿಯೇ ಇಲ್ಲ ! " You understand ? You better understand" ಎನ್ನದವರಿಲ್ಲ ! ಶ್ರೀದೇವಿಯ ಮಾತಿನ ಧಾಟಿ, ನಟನೆಯ ಶೈಲಿ, ನಾಟ್ಯದ ಭಂಗಿ, ಒಂದೊಂದೂ ಅದ್ಭುತ, ಅನನ್ಯ, ಅಮೋಘ, ಅಪೂರ್ವ.

ನಾನು ಚಿಕ್ಕಂದಿನಿಂದ ಪುಸ್ತಕದ ಹುಳುವಾಗಿದ್ದರಿಂದ (ಮತ್ತು ಈಗಲೂ ಪುಸ್ತಕದ ಹುಳುವಾಗೇ ಉಳಿದಿರುವುದರಿಂದ) ಬಹಳ ಚಿತ್ರಗಳನ್ನು ನೋಡಿಯೇ ಇಲ್ಲ. ಮನೆಗೊಂದು ಟಿವಿ ಬಂದು, ಕೇಬಲ್ ಟಿವಿ ಪ್ರಚಲಿತವಾದ ಮೇಲೆ ಒಂದಷ್ಟು ಚಿತ್ರಗಳನ್ನು ರಜೆಯಲ್ಲಿ ನೋಡಿದ್ದಿದೆ. ಅವು ಚಾಂದಿನಿ. ಚಾಲ್ ಬಾಜ್, ಮಿ|| ಇಂಡಿಯಾ, ರೂಪ್ ಕಿ ರಾನಿ ಚೋರೋಂ ಕಾ ರಾಜ, ಖುದಾ ಗವಾಹ್, ಘರ್ವಾಲಿ ಬಾಹರ್ವಾಲಿ, ಜುದಾಯಿ.ಇಂಗ್ಲಿಶ್ ವಿಂಗ್ಲಿಶ್ ಅನ್ನು ಥಿಯೇಟರ್ ನಲ್ಲಿ ನೋಡಿದ್ದೆ.

ಶ್ರೀದೇವಿಯ ಅಭಿನಯಕ್ಕೆ ಅವರೇ ಸಾಟಿ. ಬಹುಭಾಷಾ ಪಾಂಡಿತ್ಯ ಸಾಧಿಸುವುದು ಸುಲಭದ ಮಾತಲ್ಲ.  ನಿಜಕ್ಕೂ ಅವರು ದೇಶದ ಮೊದಲ female superstar ಎನ್ನಲಡ್ಡಿಯಿಲ್ಲ. ಹೇಮಾಮಾಲಿನಿ ಡ್ರೀಮ್ ಗರ್ಲ್ ಆಗಿಯೇ ಉಳಿದರೆ, ಇವರು ಡೇರಿಂಗ್ ಪಾತ್ರದಿಂದ ಹಿಡಿದು, ಸದ್ಮಾ ದ ಮನೋರೋಗಿಯ ಪಾತ್ರದ ವರೆಗೂ ಭಿನ್ನ ಭಿನ್ನ ಪಾತ್ರದ ಆಯ್ಕೆಗಳನ್ನು ಮಾಡುತ್ತಾ, ಮಿಂಚುತ್ತಾ ಹೋದವರು. ನನಗಂತೂ ಚಾಂದಿನಿ, ಜುದಾಯಿ ಮತ್ತು ಇಂಗ್ಲಿಶ್ ವಿಂಗ್ಲಿಶ್ ನನ್ನ ಅಚ್ಚುಮೆಚ್ಚಿನ ಚಿತ್ರಗಳು. ಎಷ್ಟೇ ಬಾರಿ ಟಿವಿಯಲ್ಲಿ ಬಂದರೂ ನಾನದನ್ನು ಬಿಡದೇ ನೋಡಿದ್ದೇನೆ. just for sridevi.

ಆದರೆ ಅವರು ಯಂಗ್ ಆಗೇ ಉಳಿಯಲು, ಕಾಣಲು ಸಿಕ್ಕಾಪಟ್ಟೆ ಸರ್ಜರಿಗಳನ್ನು ಮಾಡಿಸಿಕೊಂಡು ದೇಹಕ್ಕೆ ಅಷ್ಟೋಂದು ನೋವು ಮಾಡಿಕೊಂಡಿದ್ದರ ಬಗ್ಗೆ ಬೇಜಾರಿದೆ. ವಯಸ್ಸಾಗುವುದನ್ನು ತಡೆಯಲಂತೂ ಸಾಧ್ಯವಿಲ್ಲ ಅಲ್ಲವೇ ? Why couldn't she consider aging gracefully ? ದೇಹಕ್ಕೆ ದಂಡನೆ ಹೆಚ್ಚಾಯಿತೆ ?

ಅವರು ನಮ್ಮನ್ನಗಿಲಿದ ಕಾರಣ ಏನೇ ಇರಲಿ, ಶ್ರೀದೇವಿ ಇನ್ನು ನೆನಪು ಮಾತ್ರ ಎನ್ನುವ ವಿಷಯವನ್ನು ಅರಗಿಸಿಕೊಳ್ಳಲು ಕಷ್ಟವಾಗುತ್ತಿದೆ. ಈ ಸಾವು ಖಂಡಿತಾ ನ್ಯಾಯವಲ್ಲ. ಭಗವಂತ ನಿಮ್ಮನ್ನು ಸ್ವರ್ಗದಲ್ಲೂ ಚಾಂದಿನಿಯನ್ನಾಗೇ ಇಟ್ಟಿರಲಿ. ಅಲ್ಲೂ ಸಹ ನಿಮ್ಮ ಲಡ್ಡೂಗಳು ಎಲ್ಲರ ಮನ ತಣಿಸಲಿ.

ಹೆಂಡತಿಯಂದರೆ ಹೇಗಿರಬೇಕು ?

ಕಾಶಿನಾಥ್ ರವರ ಚಿತ್ರಗಳು  ಎಷ್ಟು  realistic and practical ಅನ್ನುವುದಕ್ಕೆ ಅವರ ಚಿತ್ರಗಳೆಲ್ಲವೂ ಸಾಕ್ಷಿ. ಚಿತ್ರ ಇವರ ಚಿತ್ರಗಳೆಂದರೆ ಹುಬ್ಬುಗಂಟಿಕ್ಕುತಿದ್ದರು. ಆದರೂ ನೋಡಿಯೇ ನೋಡುತ್ತಿದ್ದರು. ಅದು ಅವರ ಯಶಸ್ಸು.

ನಾನು ಬಹಳವಾಗಿ ಮೆಚ್ಚಿದ್ದ ನಿರ್ದೇಶಕರಲ್ಲಿ ಒಬ್ಬರು ಕಾಶಿನಾಥ್.ವೀಕೆಂಡ್ ವಿತ್ ರಮೇಶ್ ನ ಅವರ ಎಪಿಸೋಡ್   ನಿಜಕ್ಕೂ ಬಹಳ ಚೆನ್ನಾಗಿತ್ತು. ಅವರು ದೈವಾಧೀನರಾದಾಗ ನನಗೆ ನಿಜವಾಗಿಯೂ ಬಹಳ ನೋವಾಗಿತ್ತು. ನಾವು ಚಿಕ್ಕವರಿದ್ದಾಗ ಅವರ ಚಿತ್ರವನ್ನು ನೋಡಲು ಬಿಡುತ್ತಿರಲಿಲ್ಲ. ಹಾಗಾಗಿ, ಅವಳೇ ನನ್ನ ಹೆಂಡತಿ ಚಿತ್ರವನ್ನು ನಾನು ನೋಡಿದ್ದು ಡಿಗ್ರಿಯಲ್ಲಿ. ಆಮೇಲಿಂದ ಎಮ್ಮೆಸ್ಸಿ, ಕೆಲಸ, ಮದುವೆ ಸಂಸಾರಗಳಲ್ಲಿ ಮುಳುಗಿದ್ದ ನಾನು ಎಚ್ಚೆತ್ತಿದ್ದು ಮೊನ್ನೆ ಫೇಸ್ ಬುಕ್ಕಿನ ಒಂದು ಪೋಸ್ಟ್ ಓದಿ.

ಭುವನೇಶ್ವರಿ ಹೆಗಡೆಯವರ ಲಲಿತಪ್ರಬಂಧದ ಪೋಸ್ಟ್ ಅನ್ನು ಶೇರ್ ಮಾಡಿದ್ದ ಗೆಳತುಯೊಬ್ಬರಿಗೆ ಉತ್ತರಿಸಲು ನಾನು ಬಹಳ ಹಿಂದೆ ನೋಡಿದ್ದ ಕಾಶಿನಾಥ್ ರ ಸಿನಿಮಾ ಒಂದರ ಹಾಡನ್ನು ಹುಡುಕುತ್ತಿದ್ದೆ. ಈಗ ಗೂಗಲ್ ಎಂಬ ಪಾತಾಳಗರಡಿ ಇರುವುದರಿಂದ ಹುಡುಕಿದ್ದು ಸಿಕ್ಕೋದಿಲ್ಲ ಅನ್ನೋ ಮಾತೇ ಇಲ್ಲ. ಆ ಹಾಡನ್ನು ಅವರಿಗೆ ಕಳಿಸಿಯಾದ ಮೇಲೆ ನಾನು ಯೂಟ್ಯೂಬ್ ನಲ್ಲಿ ಆ ಚಲನಚಿತ್ರವನ್ನು ವೀಕ್ಷಿಸಿದೆ. ೧೯೯೫ ರಲ್ಲಿ ಬಿಡುಗಡೆಯಾದ ಚಿತ್ರ ಇವತ್ತಿಗೂ ಎಷ್ಟು ಪ್ರಸ್ತುತ ಎನಿಸಿತು ನನಗೆ. ಚಿತ್ರದ ಹೆಸರು "ಹೆಂಡತಿಯೆಂದರೆ ಹೇಗಿರಬೇಕು ?".ಯಾವಾಗಲೋ ಟಿವಿಯಲ್ಲಿ ಆ ಹಾಡನ್ನು ನೋಡಿದ್ದೆ. ಚಲನ ಚಿತ್ರವನ್ನು ನೋಡಲಾಗಿರಲಿಲ್ಲ. ಚಿತ್ರದ ಕಥೆ ಸ್ಥೂಲವಾಗಿ ಹೀಗಿದೆ.

ಪಿಯೂಸಿ ಪಾಸ್ ಮಾಡಿದ ಹುಡುಗನೊಬ್ಬ ತನ್ನ ತಾಯಿ ನೋಡಿದ ಹೆಣ್ಣನ್ನು ಮದುವೆಯಾಗಲು ಇಚ್ಛಿಸದೇ ಕಾಳಿದಾಸ ವರ್ಣನೆ ಮಾಡಿರುವ ಶಾಕುಂತಲೆಯ ತರಹದ ಹೆಣ್ಣನ್ನೇ ಮದುವೆಯಾಗುತ್ತೇನೆ ಎಂಬ ಹುಚ್ಚು ಭ್ರಮೆಗೆ ಬಿದ್ದು, ಅವಳನ್ನು ಹುಡುಕಲು ಬೆಂಗಳೂರಿಗೆ ಬರುತ್ತಾನೆ. ಅಲ್ಲಿ, ಅವನ ಸೋದರ ಮಾವನ ಮನೆಯಲ್ಲಿ ಆಶ್ರಯ ಪಡೆಯುತ್ತಾನೆ. ಲೈಬ್ರರಿಯೊಂದರಲ್ಲಿ ಕೆಲಸಕ್ಕೆ ಸೇರುವ ಇವನು, ಅಲ್ಲಿಗೆ ಬರುವ ಹೆಣ್ಣುಮಕ್ಕಳನ್ನು ತೀಕ್ಷ್ಣವಾಗಿ ಗಮನಿಸುತ್ತಿರುತ್ತಾನೆ. ಅಷ್ಟೇ ಅಲ್ಲ, ರಸ್ತೆಯಲ್ಲಿ ಓಡಾಡುವ ಹೆಣ್ಣುಮಕ್ಕಳನ್ನೆಲ್ಲಾ ನೋಡಿ ತಲೆಯಲ್ಲಾಡಿಸುತ್ತಿರುತ್ತಾನೆ. ಇಷ್ಟೂ ಸಾಲದು ಎಂಬಂತೆ ಹೆಂಗಸರ ಬಟ್ಟೆ ಹೊಲೆಯುವ ಟೈಲರಿಂಗ್ ಅಂಗಡಿಯಲ್ಲೂ ಹೋಗಿ ಕೆಲಸಕ್ಕೆ ಸೇರುತ್ತಾನೆ. ಈ ವಿಷಯವನ್ನು ತಿಳಿದ ಅವನ ಸೋದರಮಾವ ಅವನ ಹತ್ತಿರ ನೇರವಾಗಿ ಮಾತಾಡಲು, ಇವನು ಇರುವ ವಿಚಾರ ಹೇಳುತ್ತಾನೆ. ಆಗ ಸೋದರ ಮಾವ ತನ್ನ ಹೆಂಡತಿಯ ಮುಂದೆ ಇದೇ ವಿಚಾರ ಎತ್ತಲು, ಅವಳು ಆ ಹುಡುಗನಿಗೆ ಸತ್ಯದ ಅರಿವು ಮೂಡಿಸಲು ಪ್ರಯತ್ನಿಸಿ ವಿಫಲಳಾಗುತ್ತಾಳೆ. ಕಡೆಗೆ ಸೋದರ ಮಾವ ಮತ್ತು ಅವನ ಪತ್ನಿ ಮನೋವೈದ್ಯರ ಮೊರೆಹೋಗುತ್ತಾರೆ. ಅವರು ಒಂದು ಉಪಾಯ ಮಾಡುತ್ತಾರೆ. ಕಾಳಿದಾಸ ವರ್ಣಿಸಿದಂತೆ ಗಂಡಸೊಬ್ಬನನ್ನು ಹೆಣ್ಣಂತೆ ಅಲಂಕರಿಸಿ ಇವನ ಮುಂದೆ ನಿಲ್ಲಿಸುತ್ತಾರೆ. ಈ ಹುಡುಗನಿಗೆ ಭ್ರಮನಿರಸನವಾಗಿ ಸತ್ಯ ಯಾವುದು, ಭ್ರಮೆ ಯಾವುದು ಎಂಬ ಅರಿವಾಗುತ್ತದೆ. ಕ್ಲೈಮಾಕ್ಸ್ ಕೂಡಾ ಬಹಳ ಚೆನ್ನಾಗಿದೆ.

ಪಿಯೂಸಿ ಹುಡುಗನ ಪಾತ್ರದಲ್ಲಿ, ಅಂದರೆ ಕಥಾನಾಯಕನ ಪಾತ್ರದಲ್ಲಿ ಕಾಶಿನಾಥ್ ನೈಜ ಅದ್ಭುತ ಅಭಿನಯ ನೀಡಿದ್ದಾರೆ. example is better than precept  ಎಂಬಂತೆ ಅವರೇ ಯುವಜನತೆಯ ಪ್ರತಿನಿಧಿಯಾಗಿ ನಿಂತಿದ್ದಾರೆ. ಅವರ ಸೋದರ ಮಾವನಾಗಿ ಸುಂದರ್ ರಾಜ್, ಮಾವನ ಪತ್ನಿಯಾಗಿ ಗಿರಿಜಾ ಲೋಕೇಶ್ ಅದ್ಭುತ ಅಭಿನಯ. ಸೈಡ್ ಲೈನಲ್ಲಿ ಆವಾಗಲೇ ವೇಶ್ಯಾವಾಟಿಕೆಯ ವಿರುದ್ಧ ದನಿ ಎತ್ತಿದ್ದಾರೆ ಕಾಶಿನಾಥ್.ಈ ಚಿತ್ರವನ್ನು ಇಷ್ಟು ವರ್ಷ ನೋಡಲಾಗಿರಲಿಲ್ಲವಲ್ಲ ಎಂಬ ಬೇಜಾರನ್ನು ನಿವಾರಿಸಿದ ಯೂಟ್ಯೂಬ್ ಗೆ ಕೋಟಿ ವಂದನೆಗಳು. ಖಂಡಿತಾ ಇಂದಿನ ಯುವಕರು ನೋಡಲೇಬೇಕಾದ ಚಿತ್ರವಿದು.