RSS

ಸೂಪರ್

ಉಪೇಂದ್ರ ನಿರ್ದೇಶಿಸುವ ಚಿತ್ರ ಬುದ್ಧಿವಂತರಿಗೆ ಮಾತ್ರ ಅಂತ ನಾನು "ಶ್ !!!!!!!!" ಕಾಲದಿಂದಲೂ ಕೇಳುತ್ತಿದ್ದೆ. "ಶ್ !!","ಏ", "ಓಂ", "ಉಪೇಂದ್ರ",ಇದ್ಯಾವುದನ್ನು ನಾನು ನೋಡಲಿಲ್ಲ.ನನ್ನ ಬುದ್ಧಿವಂತಿಕೆಗೆ ಬಗ್ಗೆ ನನಗೆ ನಂಬಿಕೆ ಇರ್ಲಿಲ್ಲ ಅಂತ ಅಲ್ಲ, ನೋಡಕ್ಕೆ ಸಮಯ ಒದಗಿ ಬಂದಿರಲಿಲ್ಲ. 

ಸೂಪರ್ ರಿಲೀಸ್ ಆದಾಗಲೂ ನನಗೆ ಇದೊಂದು ನೋಡಲೇಬೇಕಾದ ಸಿನೆಮಾ ಅಂತ  ಅನ್ನಿಸಿರಲಿಲ್ಲ.ನಾನು ನನ್ನ ಲೋಕದಲ್ಲಿ ಅದೆಷ್ಟು ಮುಳುಗಿ ಹೋಗಿದ್ದೆನೆಂದರೆ, ಆ ಮೂವಿಯ ಟ್ರೈಲರ್ ಆಗಲೀ, ಪೋಸ್ಟರ್ ಆಗಲಿ ಕೂಡಾ ಶನಿವಾರ, ೧೮.೧೨.೧೦ ವರೆಗೂ ನಾನು ನೋಡಿರಲಿಲ್ಲ. ನನ್ನನ್ನು ಈ ಚಿತ್ರ ನೋಡುವಂತೆ ಮಾಡಿದ್ದು, ಈ ಚಿತ್ರದ ಪೋಸ್ಟರ್. ಪೋಸ್ಟರ್ ಮೇಕಿಂಗ್ ಚೆನ್ನಾಗಿದೆ, ಆದರೆ ಹೆಸರು ಬಳಸದೇ ಸೈನ್ ಲ್ಯಾಂಗ್ವೇಜಿನಲ್ಲಿ ನೋಡುಗರನ್ನು ಟಾಕೀಸಿಗೆ ಸೆಳೆದ ಪ್ರಚಾರದ ಗಿಮ್ಮಿಕ್ ಸೂಪರ್.ಆ ಸಿಂಬಲ್ಲು ಸೂಪರ್ ಅಂತ ನೀವು ತಿಳಿದಿದರೆ, ಉಪ್ಪಿ " ನಿಮ್ಮ ಒಂದೇ ಕಣ್ಣನ್ನು ಆ ಸೊನ್ನೆಯಲ್ಲಿಟ್ಟು ನೋಡಿ ಇಷ್ಟೇ ಪ್ರಪಂಚ ಅಂದುಕೋಬೇಡ್ರೋ ಮುಠ್ಠಾಳರಾ ! " ಅಂತ ಉಪ್ಪಿ ಅಂತಿದಾನೇನೋ ಅಂತ ನನಗನ್ನಿಸಿ ನಾನು ಆ ಚಿತ್ರ ನೋಡಬೇಕೆಂದು ನಿರ್ಧರಿಸಿದೆ.

ನಾನು ಸಾಮಾನ್ಯವಾಗಿ ಚಿತ್ರದ ರಿವ್ಯೂ ಗಳನ್ನು ಸೀರಿಯಸ್ಸಾಗಿ ತೆಗೆದುಕೊಳ್ಳದೇ ಚಿತ್ರವನ್ನು ಎಂದಾದರೂ ನೋಡಿದಾಗ ನನ್ನ ಅಭಿಪ್ರಾಯವನ್ನು ಬೆಳೆಸಿಕೊಳ್ಳುವಂಥವಳು. ಈ ಚಿತ್ರದ ರಿವ್ಯೂವನ್ನು ನಾನು ಸೀರಿಯಸ್ಸಾಗಿ ತೆಗೆದುಕೊಳ್ಳಲು ಕಾರಣ ಬಹಳಷ್ಟು ರಿವ್ಯೂಗಳಲ್ಲಿ ಕಂಡುಬಂದ, ಕೇಳಿಬಂದ "ಚಿತ್ರ ಅರ್ಥ ಆಗಲಿಲ್ಲ !" ಅನ್ನೋ ವಾಕ್ಯ.ಉಪೇಂದ್ರ "ಏ" ಚಿತ್ರದ ಟ್ಯಾಗ್ ಲೈನನ್ನು  "ಬುದ್ಧಿವಂತರಿಗೆ ಮಾತ್ರ" ಅಂತ ಹಾಕಿ ಜನರ ಬುದ್ಧಿವಂತಿಕೆಯನ್ನು ಓರೆಗೆ ಹಚ್ಚಲೋ, ಅಥವ ಥಿಯೇಟರಿಗೆ ಜನರನ್ನು ಸೆಳೆಯಲೋ ಪ್ರಯತ್ನಿಸಿರಬಹುದು. ಅದಾದ ನಂತರ ಬಂದ ಚಿತ್ರಗಳಲ್ಲಿ implicit  ಆಗಿ ಈ ಕಂಡಿಷನ್ ಅನ್ನು ಕಾಣಬಹುದು ಎಂದು ನನ್ನ ಬಳಗದ ಸೋ ಕಾಲ್ಡ್ ಮೂವಿ ಬಫ್ ಗಳು ಅಪ್ಪಣೆಗೈದಿದ್ದರು. ಈ ಹಿಂದೆ ಕಾಡದ ಪ್ರಶ್ನೆ ನನ್ನನ್ನು ಈಗ ಕಾಡಲು ಶುರುವಾಯ್ತು.ಮನರಂಜನೆಯನ್ನೇ ಮುಖ್ಯವಾಗಿರಿಸಿಕೊಂಡ ಸಿನಿಮಾಧ್ಯಮದಲ್ಲಿ ಅರ್ಥ ತಾತ್ಪರ್ಯಗಳನ್ನು ಹುಡುಕುವುದು ಸಾಧುವೇ ಎನ್ನುವುದು ನನ್ನ ಪ್ರಶ್ನೆ. ಚಿತ್ರ ಅರ್ಥವಾಗುವಂತಹ ಸಂದೇಶ ಕೊಟ್ಟರೆ ಸಂತೋಷ. ಇಲ್ಲ ಅಂದರೆ ಬೇಜಾರು ಕಳಿಸಿದರೂ ಓಕೆ, ಅರ್ಥ, ತಾತ್ಪರ್ಯ, ಭಾವಾರ್ಥ,ಅನರ್ಥ ಅಪಾರ್ಥಗಳು ಯಾಕೆ ?!

ಏನಾದರೂ ಆಗಲಿ, ಚಿತ್ರ ಅರ್ಥ ಆಗತ್ತೋ ಇಲ್ಲವೋ ನೋಡಿಯೇ ಬಿಡೋಣ  ಎಂದು ನಿನ್ನೆ ಸೂಪರ್ ಚಿತ್ರದ ವೀಕ್ಷಣೆಗೆ ಮುಹೂರ್ತ ಫಿಕ್ಸ್ ಮಾಡಿ ಚಿತ್ರ ನೋಡಿಬಂದದ್ದಾಯ್ತು.ಇದು ನಾನು ನೋಡಿರುವ ಉಪ್ಪಿಯ ಡೈರೆಕ್ಷನ್ ಇರುವ ಮೊದಲ ಚಿತ್ರ.ಚಿತ್ರ ಅರ್ಥವಾಗಿಯೇ ಆಗುತ್ತದೆ ಅಥವಾ ಆಗುವುದಿಲ್ಲ ಎಂಬ ಯಾವುದೇ ಪೂರ್ವಗ್ರಹಗಳನ್ನು ಇಟ್ಟುಕೊಳ್ಳದೇ, ನನಗೆ ಅರ್ಥವಾಗುವುದೇ ಎಂಬ ಕುತೂಹಲವನ್ನಷ್ಟೇ ಇಟ್ಟುಕೊಂಡು ನಾನು ಚಿತ್ರವನ್ನು ವೀಕ್ಷಿಸಿದೆ.ನಾನು ಚಿತ್ರದೊಟ್ಟಿಗೆ ಉಪೇಂದ್ರನನ್ನೂ ಅನಲೈಸ್ ಮಾಡಿದ್ದೀನಿ ಅನ್ಸತ್ತೆ. ಗೊತ್ತಿಲ್ಲ :)

ಇವಕ್ಕೆ ಥಂಬ್ಸ್ ಅಪ್:

೧.ಟೈಟಲ್ ಕಾರ್ಡಿನಲ್ಲಿ ವ್ಯಕ್ತಿ ಪರಿಚಯದ ಶೈಲಿ. ನೈಸ್ ಅಷ್ಟೇ. ಯಾಕಂದರೆ, ಇದನ್ನು ನಮ್ಮ ಮೆಗಾಸೀರಿಯಲ್ ಗಳಿಗೂ ಇತ್ತೀಚೆಗೆ ಅಳವಡಿಸಿದ್ದಾರೆ. ದೊಡ್ಡ ಪರದೆಯಲ್ಲಿ ಇದು ಇನ್ನೂ ಚೆನ್ನಾಗಿ ಕಂಡಿದೆ ಎಂದಷ್ಟೇ ಹೇಳಬಹುದು.ಉಪೇಂದ್ರನನ್ನು ನೋಡಿದರೆ ನನಗೆ ಅವನು extremely satirical ಮನುಷ್ಯ ಅನ್ನಿಸಿತು. ಚಿಂದಿ ಆಯುವವನ ಸ್ಟೈಲ್ ನಲ್ಲಿ ಬಂದ ಅವನ ಇಂಟ್ರೋ, ಅವನದ್ದೇ ಶೈಲಿಯಲ್ಲಿ ಹೇಳಬೇಕೆಂದರೆ, " ಜೀವನದಲ್ಲಿ ನೀವೇನೇ ಕಿಸಿದ್ರೂ ಕಡೆಗೆ ಎಲ್ಲೋ ಏನೋ ಹುಡುಕ್ಕೊಂಡು ಏನಾದ್ರು ಆಯ್ಕೊಳಕ್ಕೆ ಕಾಯ್ತಿರ್ತಿರಾ, ಸಿಕ್ಕಿದ್ದೆಲ್ಲಾ ಗೆಬುಕ್ಕೊತಿರ್ತಿರಾ " ಅನ್ನೋ ಸಂದೇಶದ ರವಾನೆಯ ಸೂಕ್ಷ್ಮ ರೀತಿ ಸೂಪರ್.

೨. ನಾನು ಕಂಡ ಇನ್ನೊಬ್ಬ satirical  ವ್ಯಕ್ತಿ ಯೋಗರಾಜ ಭಟ್. ಪಂಚರಂಗಿಯಲ್ಲಿ ಅವರ ಧ್ವನಿ ಮತ್ತು ಡೈರೆಕ್ಷನ್ ನ ಶೈಲಿ ನೋಡಿ, ಹಾಗನ್ನಿಸಿತ್ತು.ಉಪೇಂದ್ರ ಅವರ ಧ್ವನಿಯನ್ನೇ  ಚಿತ್ರದ ಆರಂಭದಲ್ಲಿ ಬಳಸಿಕೊಂಡು ಈ ಚಿತ್ರವನ್ನು satirical angle  ಇಂದ ನೋಡಬೇಕೆಂದು ಸೂಕ್ಷ್ಮವಾಗಿ ತಿಳಿಸಿದ್ದಾನೆ ಅನ್ನಿಸಿತು. ಅವನು ಉಪಯೋಗಿಸಿದ ಲಾಜಿಕ್ ಸೂಪರ್.ನಾವು ನಮ್ಮ ಚರಿತ್ರೆಯ ಬಗ್ಗೆ ಕೊಚ್ಚಿಕೊಳ್ಳೋದ್ರಲ್ಲಿ ನಿಪುಣರೇ ಹೊರತು, ನಮ್ಮಲ್ಲಿ ಆ ಆವೇಶ, ನಿಜವಾದ ಭಕ್ತಿ ಎಲ್ಲಿದೆ ಅಂತ "ಲೈಫು ಇಷ್ಟೇನೆ" ಭಟ್ಟರ ವಿಭಿನ್ನ ವಿಶಿಷ್ಟ ಶೈಲಿಯಲ್ಲಿ ಹೇಳಿಸಿರುವ ರೀತಿ ಸೂಪರ್.

೩. ಮೇಕಿಂಗ್ ಅದ್ದೂರಿಯಾಗಿದೆ.ನೈಸ್, ಬಟ್ ನಾಟ್ ಸೂಪರ್. ಅಲ್ಲಲ್ಲಿ ಸ್ವಲ್ಪ ದುಡ್ಡುಳಿಸಬಹುದಿತ್ತು. ಇರ್ಲಿ.

೪. ಆಂಗ್ಲರಿಗೆ ಸರಿಯಾಗಿ, ಸಂಪದ್ಭರಿತವಾಗಿ ಅವಮಾನ ಮಾಡಿದ್ದಾನೆ. ಪಕ್ಕಾ ದೇಶಭಕ್ತರಿಗೆ ಇದು ಸಂತೋಷ ತರುತ್ತದೆ. ನನಗೂ ತಂದಿದೆ.

೫.  ಭಾರತೀಯರಿಗೆ ಶಾಲಲ್ಲಿ ಸುತ್ತಿ ಹೀನಾಮಾನ ಬೈದಿರುವ ರೀತಿಗೆ ನನ್ನದು ಸಿಳ್ಳೆ ಚಪ್ಪಾಳೆಗಳಿವೆ. (ಗಾಬರಿ ಆಗಬೇಡಿ, ನಾನು ಸಿಳ್ಳೆ ಹಾಕಿಲ್ಲ :) ಇಲ್ಲಿ ಬರೆಯುತ್ತಿದ್ದೇನೆ ಅಷ್ಟೇ) ನಾನೆಂಥಾ ಭಾರತೀಯಳು ಎಂದು ನೀವು ನನ್ನೊಟ್ಟಿಗೆ ವಾಗ್ಯುದ್ಧಕ್ಕೆ ಇಳಿಯುವ ಮುನ್ನ ನಾನು ನನ್ನ ಅಭಿಪ್ರಾಯವನ್ನು ಸ್ಪಷ್ಟಪಡಿಸುತ್ತೇನೆ.

ನಾವು ಬೇಕಿಲ್ಲದ ಕಡೆ ಅಹಿಂಸಾವಾದಿಗಳು, ಬೇಕಿಲ್ಲದ ಕಡೆ ಹಿಂಸಾಚಾರಿಗಳು, ಬೇಕಿಲ್ಲದ ಕಡೆ ಮಹಾ ಒಳ್ಳೆಯವರು, ಮತ್ತು ದೇಶದ ಹೊರಗೆ ದೇಶಭಕ್ತರು. ಇದನ್ನ ಎದುರಿಗೇ ಇದ್ದದ್ದನ್ನು ಇದ್ದ ಹಾಗೆ ಹೇಳಿ ನೋಡಿದರೆ ಎಲ್ಲರೂ "ಹೌದು, ನಾವಿರೋದೇ ಹೀಗೆ" ಅನ್ನುವ ನಿರ್ಲಿಪ್ತ, ನಿರ್ಭಾವ ಧೋರಣೆ ತೋರಿಸುವಂಥವರು ನಾವು. ಶಾಲಲ್ಲಿ ಸುತ್ತಿ ಹೊಡೆದರೆ ಅದು ಹೆಂಗೋಪಾ,  ನಮಗೆ ಸ್ವಲ್ಪ ಹೆಚ್ಚು ಅವಮಾನ ಆಗುತ್ತದೆ. ನಾವು ಹುಬ್ಬು ಗಂಟಿಡುತ್ತೇವೆ, "I dont like it" ಅಂತ ಉಪೇಂದ್ರನ ಸ್ಟೈಲಲ್ಲೇ ಹೇಳುತ್ತೇವೆ, ಮತ್ತು ಸಾಧ್ಯವಾದರೆ  ಬ್ಲಾಗುತ್ತೇವೆ :D. ಆದರೆ, ಇಲ್ಲಿ ಉಪ್ಪಿ ಗೆಲ್ಲುತ್ತಾನೆ ! ಅವನಿಗೆ " ನಾವು ಹೋಪ್ಲೆಸ್ ಜನ" ಅಂತ ಅರಿತುಕೊಳ್ಳುವುದು ಬೇಕಾಗಿರತ್ತೆ. ನಾವು ತಪ್ಪು ಮಾಡಿರುವ ನಿಜ ನಮಗೆ ಅರಿವಾದಗಲೇನೆ ನಮಗೆ ಕೋಪ ಬರುವುದು ನೋಡಿ! ಹಂಗಾದರೂ ನಮಗೆ ಸಂದೇಶ ತಲುಪಿರುತ್ತದೆ.  ಅವನಿಗೆ, ಚಿತ್ರದ ಗೆಲುವಿಗೆ ಅಷ್ಟು ಸಾಕು. ಉಪೇಂದ್ರನ ಈ strategy  ಸೂಪರ್.ಅವನ್ನದ್ದೇ ಸ್ಟೈಲಲ್ಲಿ, "ನನ್ ಮಕ್ಳಾ...ಯಾಕ್ರೋ ಹಿಂಗ್ ಹಾಳಾಗೋಗಿದಿರಾ ? " ಅಂತ ಸಿಂಗಲ್ ಲೈನಲ್ಲಿ ಕೇಳಿದ್ದರೆ ಜನ ಇಹಿಹಿಹಿ ಅಂತ ಕಿಸಿದಿರೋರು. ಚಪ್ಪಾಳೆ ಹೊಡೆದಿರೋರು. ಮರ್ತೋಗಿರೋರು. ಅಷ್ಟೇ. ಆದರೆ ಇಲ್ಲಿ ಅವನು ನಮ್ಮ ಮೌಢ್ಯವನ್ನ ವೈಭವೀಕರಿಸಿ ಸಕ್ಕತ್ effective ಆಗಿ ತೋರಿಸಿರೋದ್ರಿಂದ,ಇದು ಬಹಳ ಕಾಲ ನೆನಪಿನಲ್ಲಿ ಇರುವಂಥದ್ದು.  ಮುಂದಿನ ಸರ್ತಿ, ನಮ್ಮ  ಕೆಟ್ಟ ಕೆಲಸಗಳೂ ದೊಡ್ಡ ಪರದೆಯಲ್ಲಿ ಇನ್ನೂ ಅಸಹ್ಯವಾಗಿ ಕಂಡೀತು ಎಂದು ಥಿಯೇಟರಿಗೆ ಕಾಲಿಟ್ಟಿರಬಹುದಾದ ಮಾನವಂತರು ಅಂಜುತ್ತಾರೆ. ಸರಿ ಸುಮಾರು 0.001% ಅಷ್ಟೇ ನಾವು ಸುಧಾರಿಸುತ್ತೇವೆ. ಅಷ್ಟಾದ್ರು ಆಗತ್ತಲ್ಲಾ,ಈ ನಿಟ್ಟಿನಲ್ಲಿ ಉಪ್ಪಿಯ ಪ್ರಯತ್ನ ಸೂಪರ್, I like it... I like it. :)

೫. ಕಾರ್ಪೋರೇಟ್ ರೌಡಿಸಮ್ ಅಂತ ಬ್ಯಾಂಕಿನ ಟೆಲಿಕಾಲರ್ಸ್ ಗೆ ಕಿಚಾಯ್ಸಿರುವುದು ಸೂಪರ್ :)[Like Upendra, no offence meant.]

೬. ಒಂದಂತೂ ಮೆಚ್ಚಲೇಬೇಕು. ಐಪಿಲ್, ಡಿಪಿಲ್ ಹರಾಜನ್ನು ಹೆಣ್ಣಿನ ಮಾನದ ಹರಾಜಿಗೆ ಹೋಲಿಸಿರೋದಕ್ಕೆ ನನ್ನ ಎರಡು ಥಂಬ್ಸ್ ಅಪ್. ಅಣ್ಣಾ ಉಪೇಂದ್ರ...ಎಂಥಾ ಥಿಂಕಿಂಗ್ ಕಣಯ್ಯ ನಿನ್ನದು ! ನಿಜಕ್ಕೂ ಅದು ಎಲ್ಲಾ ದೇಶದ ಆಟಗಾರರ ಮಾನದ ಹರಾಜು. ನಮ್ಮ ದೇಶಭಕ್ತಿಯ ಹರಾಜು. ನಮ್ಮ ದೇಶ ಭಕ್ತಿ ನಮ್ಮ ದೇಶದ ಹೆಣ್ಣು ಮಗಳೊಬ್ಬಳ ಮಾನದಷ್ಟೇ ಮುಖ್ಯ ಅಂತ ಸಕ್ಕತ್ತಾಗಿ ತೋರಿಸಿಕೊಟ್ಟೀದ್ದೀಯಾ, ಶಭಾಶ್ ಗುರು ! I really liked it.ನಿಜ್ವಾಗ್ಲೂ ಸೂಪರ್.

ಐ ಪಿ ಎಲ್ ಹೊಸದರಲ್ಲಿ ಸನ್ಮಾನ್ಯ ರಾಹುಲ್ ದ್ರಾವಿಡ್ ಒಂದು ಮಾತು ಹೇಳಿದ್ದರು: " ಪ್ರಪಂಚದ ಆಟಗಾರರನ್ನೆಲ್ಲಾ ಹರಾಜು ಹಾಕಿದರೆ, ಒಬ್ಬರು ಇನ್ನ್ಯಾವ್ದೋ ದೇಶ ಸೇರಿದರೆ, ಅವರು ಯಾರನ್ನು ಎದುರಿಸಿ ಆಡಬೇಕು ? ಬೇರೆ ಟೀಮಿನಲ್ಲಿರುವ ತನ್ನ ದೇಶದವನನ್ನೋ, ಅಥವಾ ತನ್ನ ಟೀಮಿನಲ್ಲಿರುವ ಬೇರೆ ದೇಶದವನನ್ನೋ ? ಇದು ನಮ್ಮ ಮಾನದ ಹರಾಜು ಹಾಕಿದಂತೆಯೇ" ಅಂತ.ಅದನ್ನ  ಸೂಚ್ಯವಾಗಿ, powerful  ಆಗಿ, effective  ಆಗಿ ತೋರಿಸಿರೋದಕ್ಕೆ,Hats off.

ನನ್ನ ತಲೆ ಇನ್ನೊಂದು angle  ನಲ್ಲಿ ಯೋಚನೆ ಮಾಡಿತು. ಹೀಗೆ ಉಪ್ಪಿ ಯೋಚಿಸಿದ್ದಾನೋ ಇಲ್ವೊ ಗೊತ್ತಿಲ್ಲ. ಕ್ರಿಕೆಟ್ಟನ್ನು ನಮ್ಮ ದೇಶದಲ್ಲಿ religion  ಥರ ಫಾಲೋ ಮಾಡ್ತಾರೆ. ಕ್ರಿಕೆಟ್ಟಿನ ಆಟಗಾರರ ಹರಾಜು ನಮ್ಮ ದೇಶದ ಧರ್ಮದ, ಮಾನದ ಹರಾಜು ಅಂತ ಹೆಣ್ಣು ಮಗಳನ್ನು ರಿಲಿಜಿಯಸ್ ಐಕಾನ್ ಆಗಿ ತೋರಿಸಿ, "ಸಾಕ್ ನಿಲ್ಸ್ರಪ್ಪಾ ಈ ಹರಾಜು" ಅಂತ ಹೇಳಕ್ಕೆ ಹೊರ್ಟಿದಾನಾ?!

೭. ಮತ್ತಿನ್ನೊಂದು ಅನಾಲಜಿಯನ್ನ ಉಪ್ಪಿ ಸಕ್ಕತ್ತಾಗಿ ಬಳಸಿಕೊಂಡಿದ್ದಾನೆ. ಅದು ಸಿ.ಎಮ್, ಹೀರೋಯಿನ್ನಿನ ಹಳ್ಳಿ ಜೀವನ, ನುಗ್ಗೇಕಾಯಿ, ಬದನೇಕಾಯಿ,ಮತ್ತು ಕಾಮನ್ ಮ್ಯಾನ್.In short, the climax.

ನಾವು ನಮ್ಮ ದೇಶವನ್ನ ನೀಟಾಗಿ ಇಟ್ಟುಕೊಂಡರೆ ಭಾರತ ಮಾತೆಯಂತೆ ಕಾಣುವ ಪ್ರತಿಯೊಬ್ಬ ಭಾರತೀಯ ಹೆಣ್ಣು ಮಗಳು ಸಿಂಗರಿಸಿಕೊಂಡಂತೆ ಅನ್ನೋದನ್ನ ಹೇಳುವ ಈ ಅನಾಲಜಿ ಸಕ್ಕತ್ತಾಗಿದೆ. ಮಂತ್ರಿಗಳು  ಏನೇ ಮಾಡಿದರೂ ನುಗ್ಗೇಕಾಯಿ ಮುರಿದಂತೆ , ಮತ್ತು ಹೇಳುವುದೆಲ್ಲಾ ಬದನೇಕಾಯಿ ಅಂತ ಸರಿಯಾಗಿ ಆಡಿಕೊಂಡಿದ್ದಾನೆ. ವೆರಿ ಗುಡ್."ಹಳ್ಳಿ ಇಲ್ಲದೇ ದಿಲ್ಲಿ ಇರಲಾರದು ಮಂತ್ರಣ್ಣಾ..." ಅಂತ ಸೈಲೆಂಟಾಗಿ ಹೇಳಿದಾನೆ. ಭೇಷ್.

ಕಾಮನ್ ಮ್ಯಾನು ಸಿ.ಎಮ್ ಆಗಬಹುದು, ಮತ್ತು ಸಿ.ಎಮ್ಮು ಕಾಮನ್ ಮ್ಯಾನೇ ಅನ್ನುವ biconditional logic,once again super :)

ಇವಕ್ಕೆ ಥಂಬ್ಸ್ ಡೌನ್:

೧. ಯಾಕ್ ಬೇಕಿತ್ತು ಡಮಾ ಡಮಾ ಮ್ಯೂಸಿಕ್ಕು ? Over  ಆಯ್ತು.

೨. " ನಾನು ಸೂಪರ್ರೋ ರಂಗ "ಸಾಂಗಿಗೆ ರಿಂಗ ರಿಂಗಾ ಟ್ಯೂನನ್ನೇ ಮಾಡಿಫೈ ಮಾಡುವ ಪೆದ್ದುತನ ಯಾಕೆ ಬೇಕಿತ್ತು ? Was that a compromise with Harikrishna’s music ?

೩. ಇಂಗ್ಲಿಶು. ಅಣ್ಣಾ ಉಪೇಂದ್ರ,  ಇಂಗ್ಲೀಶಲ್ಲಿ ಹಾಡು ಮತ್ತು ಡೈಲಾಗ್ ಗಳನ್ನ ನಾವು ಕನ್ನಡಿಗರು ಕನ್ನಡಕ್ಕಿಂತ  ಬೇಗ ಮತ್ತು ಚೆನ್ನಾಗಿ ಅರ್ಥ ಮಾಡ್ಕೊತಿವಿ ಅಂತ ನೀನು ನಮ್ಮನ್ನ ಶಾಲಲ್ಲಿ ಸುತ್ತಿ ಹೊಡಿತಿದಿಯಾ ಅನ್ನೊ ವ್ಯಂಗ್ಯವನ್ನ ನಾನು ಸಂಪೂರ್ಣವಾಗಿ ಅರ್ಥ ಮಾಡ್ಕೊತಿನಿ. ಆದ್ರೆ ಈಗ, ಮಕ್ಕಳಿಗೆ ಕನ್ನಡ ಓದಿಸಲಿಕ್ಕೆ, ಹೆಚ್ಚು ಅಂಕ ಗಳಿಸಲಿಕ್ಕೆ ತಂದೆ ತಾಯಿಯರು ಕನ್ನಡ ಮನೆಪಾಠಕ್ಕೆ ಹೋಗುತ್ತಿದ್ದಾರೆ. ಹಾಗಾಗಿ, ನೀನು ಕನ್ನಡ ಮಾತಾಡಿದರೆ, ಈಗ ಪರಭಾಷಿಗರೂ ಅರ್ಥ ಮಾಡ್ಕೊತಾರೆ, ಮುಂದಿನ ಸರ್ತಿಯಿಂದ ದಯವಿಟ್ಟು  ಹಾಡಲ್ಲಿ ಕನ್ನಡವನ್ನು ಬಳಸುವಂಥವನಾಗು.ನಮಗೆ ಮತ್ತು ಅವರಿಗೂ ಸಹ ಕನ್ನಡ ಅರ್ಥ ಆಗತ್ತೆ.

೪.ಹೈ ಬಿ.ಪಿ ಪೇಷೆಂಟ್ ಥರ ಡೈಲಾಗ್ ಹೇಳೋ ಅಗತ್ಯ ಇಲ್ಲ. ಪ್ಲೀಸ್, ಕೀಪ್ ಯುವರ್ ಕೂಲ್.

ಉಪ್ಪಿಯ ಚಿತ್ರದಲ್ಲಿ ನನಗೆ ಕಂಡದ್ದು ಇಷ್ಟು. ಚಿತ್ರವನ್ನು ನಾನು ಅರ್ಥ ಮಾಡಿಕೊಂಡಿದ್ದು ಇಷ್ಟು. ಇನ್ನು ಉಪ್ಪಿಯ ಆ ಗರ ತಿರುಗುವ ಕಣ್ಣು ಸ್ವಲ್ಪ ಕಾಲ ತದೇಕಚಿತ್ತದಿಂದ ನೋಡಿದರೆ, ಅದು ಗಿಮ್ಮಿಕ್ ಇರಲಿ, ಸ್ಟೈಲಿರಲಿ, ಏನಾದರೂ ಇರಲಿ, I feel he is a man who is in constant search of something new and he wants to be the first one to capture it. He is an innovator of a different type, a writer with a satirical style and a director with a fantastic imagination and flamboyance.He waits to outwit and outsmart the viewer. In short, he is like an open ended experiment .There is always new angles of looking at it, new dimensions to it and newer directions to explore in it. If you  think you have understood Uppi and his movies fully, there is always an angle which has not been looked at.[ನಾನು ಟೈಂ ಪಾಸಿಗೆ ಲೈಬ್ರರಿಯಲ್ಲಿ ಸೈಕಾಲಜಿ ಓದಿದ್ದರ ಪರಿಣಾಮ ಈ ಅನಾಲಿಸಿಸ್ ಇದ್ದಿರಬಹುದು. ಗೊತ್ತಿಲ್ಲ.]

ಆದರೂ, ಉಪ್ಪಿ ಸ್ವಲ್ಪ ಅರ್ಥ ಆದ. ಮತ್ತೆ ಚಿತ್ರವೂ. :)

ಹೋಗಲೆಲ್ಲಿಗೆ ಈಗ ನಾನು ?

ರಾಹತ್ ಫಾತೆಹ್ ಅಲಿ ಖಾನ್ ಅವರ ಹಾಡುಗಳನ್ನು ಕೇಳಿದರೆ ನನ್ನ ನಿರ್ಭಾವುಕ ಮುಖದಲ್ಲಿ ಭಾವನೆಗಳು ಅದು ಹೇಗೆ ಮೂಡುತ್ತವೋ ಗೊತ್ತಿಲ್ಲ. "ಜಿಯಾ ಧಡಕ್ ಧಡಕ್ ಜಾಯೇಂ" ಹಾಡಿಗೆ ಒಂದು ಮುಗುಳ್ನಗೆ, "ಬೋಲ್ನಾ ಹಲ್ಕೆ ಹಲ್ಕೆ" ಹಾಡಿಗೆ ಒಂದು ಮಾತಾಡುವ ಮೌನ, "ಜಗ್ ಸೂನಾ ಸೂನಾ ಲಾಗೇ" ಮತ್ತು "ಜಾಊಂ ಕಹಾಂ" ಹಾಡಿಗೆ ಧಾರಾಕಾರ ಅಳು.ಜಾಊಂ ಕಹಾಂ ಹಾಡಂತೂ ನನ್ನ anthem ಆಗಿದೆ ಅಂದರೆ ತಪ್ಪಾಗಲಾರದು. ನನಗೆ ಯಾಕೋ ಆ ಹಾಡನ್ನು ನನ್ನ ಜೀವನವನ್ನು ನೋಡಿಯೇ ಬರೆದ ಹಾಗೆ ಭಾಸವಾಗತ್ತೆ. ರಾಹತ್ ಅವರು ನನ್ನ ಭಾವನೆಗಳ ದನಿಯೇ ಆಗಿದ್ದಾರೆ. ಆ ಪಲುಕು, ಆ ಪ್ರಶ್ನಾರ್ಥಕ ಹಾಡಿನ ಶೈಲಿ, ಅಬ್ಬಬ್ಬಾ....!!!!

ಸುಭಾಷಿತಗಳ ಕಾವ್ಯರೂಪದ ಕನ್ನಡ ತರ್ಜುಮೆಯಾಯ್ತು, ಕನ್ನಡ ಹಾಡುಗಳ ಆಂಗ್ಲ ತರ್ಜುಮೆಯಾಯ್ತು.ನನ್ನ ಕೈಲಿ ಇವುಗಳನ್ನ ಮಾಡಿಸಿದ ಶ್ರೇಯವೆಲ್ಲ ಅರುಣರಿಗೆ ಸಲ್ಲಬೇಕು. ನನ್ನಿಷ್ಟದ ಈ ಹಾಡಿನ ಮೊದಲ ಚರಣವನ್ನು ನಾನು ಗೂಗಲ್ ಬಝ್ ನಲ್ಲಿ ಹಾಕಲಾಗಿ, ಮಿತ್ರಬಾಂಧವರು ಇದರ ಕನ್ನಡ ಭಾವಾನುವಾದ ಕೇಳಿದರು.ನಾನು ಸಮಯವಿಲ್ಲವೆಂದು ತಪ್ಪಿಸಿಕೊಳ್ಳುತ್ತಿದ್ದೆ. ಆದರೆ ಇವತ್ತು ಹಾಡು ಕೇಳಿದಾಗ ಯಾಕೋ ಹಾಡನ್ನು ತರ್ಜುಮೆ ಮಾಡಿಯೇ ಬಿಡಬೇಕೆಂದು ಅನ್ನಿಸಿ ಈ ಹಾಡಿನ ಮೂಲ ಹಿಂದಿ ರೂಪ ಮತ್ತು ಕನ್ನಡ ಭಾವಾನುವಾದ ಹಾಕುತ್ತಿದ್ದೇನೆ. ಇದು ಇಂತಹ ತರ್ಜುಮೆಗಳ ಮೊದಲ ಪ್ರಯತ್ನ. ಇದಕ್ಕೆ ತಮ್ಮೆಲ್ಲರ ಪ್ರೋತ್ಸಾಹದ ನಿರೀಕ್ಷೆಯಲ್ಲಿದ್ದೇನೆ.

ಹಿಂದೀ ಮೂಲರೂಪ:

ಕಬ್ ಸೆ ಉಸ್ ಕೋ ಢೂಂಡ್ ತಾ ಹೂಂ ಭೀಗಿ ಪಲ್ಕೋಂ ಸೆ ಯಹಾಂ
ಅಬ್ ನ ಜಾನೆ ವೋ ಕಹಾಂ ಹೈ ಥಾ ಜೊ ಮೇರಾ ಆಶಿಯಾಂ
ರಬ್ಬಾ ಮೇರೆ ಮುಝ್ ಕೋ ಬತಾ...ಹಾಯೇ..
ದೀ ಮುಝೆ ಕ್ಯೂ ಯೇ ಸಝಾ...
ಅಬ್ ಸಾರೇ ಬಂಧನ್ ತೋಡ್ ಕೇ ಯಾದೋಂ ಕೋ ತನ್ಹಾ ಛೋಡ್ ಕೇ
ಮೈ ಗಮ್ ಸೇ ರಿಷ್ತಾ ಜೋಡ್ ಕೇ ಜಾಊಂ ಕಹಾಂ...


ಏಕ್ ಛೋಟಾ ಸಾ ಜಹಾಂ ಥಾ ಚಂದ್ ಖುಷಿಯೋಂ ಸೇ ಭರಾ
ಉಸ್ ಕೋ ಮುಝ್ ಸೇ ಚೀನ್ ಕರ್ ಹೈ ಮಿಲ್ ಗಯಾ ತುಝ್ ಕೋ ಭಿ ಕ್ಯಾ
ಅಬ್ ಹೈ ಫಕತ್ ಸಿರ್ಫ್ ಜಾ..(ಜಾನ್)
ಕರ್ ದೂಂ ಮೈ ವೋ ಭಿ ಅತಾ...
ಅಬ್ ಸಾರೇ ಬಂಧನ್ ತೋಡ್ ಕೇ ಯಾದೋಂ ಕೋ ತನ್ಹಾ ಛೋಡ್ ಕೇ
ಮೈ ಗಮ್ ಸೇ ರಿಷ್ತಾ ಜೋಡ್ ಕೇ ಜಾಊಂ ಕಹಾಂ...

ವಕ್ತ್ ಕೆ ಕಿತ್ ನೇ ನಿಶಾನ್ ಹೈ ಜ಼ರ್ರೆ ಜ಼ರ್ರೆ ಮೈಂ ಯಹಾಂ
ದೋಸ್ತೋ ಕೇ ಸಾಥ್ ಕೆ ಪಲ್ ಕುಛ್ ಹಸೀನ್ ಕುಛ್ ಗಮ್ ಜ಼ದಾ
ಸಬ್ ಹುಆ ಅಬ್ ತೋ ಫನಾ..
ಡಸ್ ರಹಾ ಬಾಕೀ ಧುಆ...
ಅಬ್ ಸಾರೇ ಬಂಧನ್ ತೋಡ್ ಕೇ ಯಾದೋಂ ಕೋ ತನ್ಹಾ ಛೋಡ್ ಕೇ
ಮೈ ಗಮ್ ಸೇ ರಿಷ್ತಾ ಜೋಡ್ ಕೇ ಜಾಊಂ ಕಹಾಂ...

ಕನ್ನಡ ಭಾವಾನುವಾದ:

ಎಂದಿನಿಂದ ಅರಸುತಿರ್ದೆನವನ
ಒದ್ದೆ ಕಂಗಳಿಂದ ನಾನು.
ನನ್ನ ಆಸರೆಯಾಗಿದ್ದವನವನು
ಈಗೆಲ್ಲಿರುವನೋ ಕಾಣೆನು.

ನನ್ನಿಷ್ಟದ ದೈವವೆ ಹೇಳು ನೀನು
ನನಗೇಕೆ ಈ ಶಿಕ್ಷೆ ಕೊಟ್ಟೆ ನೀನು ?
ತೊರೆದು ಸಕಲ ಬಂಧಗಳನು
ಒಂಟಿಯಾಗಿಸಿ ಎಲ್ಲ ನೆನಪನು
ನೋವಿನೊಂದಿಗೆ ಬೆಳೆಸಿ ಬಂಧವನು
ಹೋಗಲೆಲ್ಲಿಗೆಈಗ ನಾನು?!

ಇತ್ತೊಂದು ನನ್ನ ಪುಟ್ಟ ಜಗತ್ತು
ಪುಟ್ಟ ಖುಶಿಗಳಿಂದದು ತುಂಬಿತ್ತು
ಕಿತ್ತುಕೊಂಡೆಯಲ್ಲ ಅದನ್ನೂ ನೀನು
ಅದರಿಂದ ನಿನಗೆ ಸಿಕ್ಕಿದ್ದಾದರೂ ಏನು ?
ಜೀವವೊಂದಿದೆ ಬಾಕಿ ಇನ್ನೂ
ಕೊಟ್ಟುಬಿಡಲೇನು ಅದನ್ನೂ ?
ತೊರೆದು ಸಕಲ ಬಂಧಗಳನು
ಒಂಟಿಯಾಗಿಸಿ ಎಲ್ಲ ನೆನಪನು
ನೋವಿನೊಂದಿಗೆ ಬೆಳೆಸಿ ಬಂಧವನು
ಈಗ ಹೋಗಲೆಲ್ಲಿಗೆ ನಾನು?!


ಕಾಲದ ಹೆಜ್ಜೆಗುರುತುಗಳಿವೆ
ಅಡಿ ಅಡಿಯಲ್ಲೂ ಇಲ್ಲಿ |
ಸ್ನೇಹಿತರೊಟ್ಟಿಗೆ ಕಳೆದ ಸಮಯ
ಸಿಹಿಯೂ ಕಹಿಯೂ ಅಲ್ಲಲ್ಲಿ ||
ಈಗೆಲ್ಲವೂ ಹಾಳಾಯಿತಲ್ಲಾ
ಮಿಕ್ಕ ನೆನಪು ಹಾವಿನಂತೆ
ಬುಸುಗುಡುತ್ತಿದೆಯಲ್ಲಾ !
ತೊರೆದು ಸಕಲ ಬಂಧಗಳನು
ಒಂಟಿಯಾಗಿಸಿ ಎಲ್ಲ ನೆನಪನು
ನೋವಿನೊಂದಿಗೆ ಬೆಳೆಸಿ ಬಂಧವನು
ಈಗ ಹೋಗಲೆಲ್ಲಿಗೆ ನಾನು?!


ಈಗ ಈ ಹಾಡನ್ನು ರಾಹತ್ ಸಹಾಬ್ ಅವರ ಕಂಠಸಿರಿಯಲ್ಲಿ ಕೇಳಿಬಿಡಿ.


KK

ಈಗಿನ ಹಾಡುಗಾರರಲ್ಲಿ ನನಗೆ ಸೋನು ನಿಗಂ ಗಿಂತಲೂ ಕೆ ಕೆ ತುಂಬಾ ಇಷ್ಟ. HDDCS "ತಡಪ್ ತಡಪ್" ಹಾಡನ್ನು ಯಾವ ಪ್ರೇಮಿಯೂ ಮರೆಯಲು ಸಾಧ್ಯವಿಲ್ಲ. ಯಾಕಂದ್ರೆ ಅವರ ಧ್ವನಿಯಲ್ಲಿ ನೇರ ಪ್ರಾಮಾಣಿಕತೆಯಿದೆ.ಎಷ್ಟೆಂದರೆ " tujhko mein karoon haasil lagi hain yahi dhun" ಅಂತ ಅವರು "ದಿಲ್ ಇಬಾದತ್" ಹಾಡಿನಲ್ಲಿ ಹಾಡಿದಾಗ ಅದು ನಿಜ ಅಂತ ಅನಿಸುವಷ್ಟು! ಕೆಕೆಯ ಆ ಅದ್ಭುತ "honestly possessive" ಕಂಠದ ಮುಂದೆ ಇಮ್ರಾನ್ ಹಶ್ಮಿ ಆ ಹಾಡಲ್ಲಿ ಕಾಣೋದೇ ಇಲ್ಲ ನನಗೆ ! [ಎರಡು ಸ್ಪಷ್ಟೀಕರಣಗಳು: 1. I dont like Imran Hashmi. 2. ಅವನಲ್ಲದೇ ಇನ್ಯಾರು ಕಾಣ್ತಾರೆ ಅಂತ ಕೇಳ್ಬೇಡಿ, ಸಧ್ಯಕ್ಕೆ ಉತ್ತರ ಗೊತ್ತಿಲ್ಲ :D ]

ಇರ್ಲಿ, ಇವತ್ತು ನಾನು ಮಾತಾಡಕ್ಕೆ ಹೊರ್ಟಿರೋದು ದಿಲ್ ಇಬಾದತ್ ಬಗ್ಗೆ ಅಲ್ಲ. ಝಂಕಾರ್ ಬೀಟ್ಸ್ ಅಂತ ಒಂದು ಚಿತ್ರ ಬಂದಿತ್ತು. ಅದರಲ್ಲಿ "ತು ಹೈ ಆಸ್ ಮಾನ್ ಮೈಂ..." ಅಂತ ಒಂದು ಹಾಡಿದೆ. ಆ ಹಾಡಿನ್ನು ದೇವರ ಬಗ್ಗೆ ಚಿತ್ರೀಕರಿಸಲಾಗಿದೆಯಾದರೂ ಅದು ಒಬ್ಬ ಪತಿ ತನ್ನ ಪತ್ನಿಗೆ ಹಾಡಿದ್ದು ಅಥವಾ ಪ್ರಿಯಕರ ತನ್ನ ಪ್ರೇಯಸಿಗೆ ಹಾಡಿದ್ದು ಅಂತ ಅರ್ಥ ಬರುವ ಹಾಗೆ ಕೂಡ ಹಾಡನ್ನು ರಚಿಸಲಾಗಿದೆ. ಆ ಹಾಡಿನ ಸೌಂದರ್ಯ ಅದು. ಅದಕ್ಕೆ ಕಲಶವಿಟ್ಟಂತೆ ಕೆಕೆ ಅವರ ಕಂಠದಿಂದ ಹೊರಹೊಮ್ಮಿರುವ ಪ್ರತಿಯೊಂದು ಪದವು ಭಕ್ತಿಪೂರ್ವಕ ಪ್ರೀತಿಯ ಸಾಗರದಲ್ಲಿ ಅದ್ದಿ ಅದ್ದಿ ತೆಗೆದು ಪೋಣಿಸಿದಂತಿದೆ. ನಿಜ್ವಾಗ್ಲೂ, It is truly mesmerizing !

ಹಾಡಿನ ವಿಡಿಯೋ ಇಲ್ಲಿದೆ.