RSS

ಲಾಕ್ ಡೌನ್ ಸಿನಿಮಾ ಮ್ಯರಾಥಾನ್

ಬಾಣಂತನದ ಕಾಲದಿಂದಲೂ ನನಗೆ ಚಿತ್ರ ಮಂದಿರಗಳಿಗೆ ಹೋಗಿ ಸಿನಿಮಾ ನೋಡುವುದು ಕಷ್ಟ ಸಾಧ್ಯವಾಗಿತ್ತು. ಏಕೆಂದರೆ ಮಗುವನ್ನು ನೋಡಿಕೊಳ್ಳಲು ಮನೆಯಲ್ಲಿ ಯಾರೂ ಇರುತ್ತಿರಲಿಲ್ಲ. ನನ್ನ ಕಷ್ಟವನ್ನು ಅರಿತ ನನ್ನ ಗಂಡ ೫೫ ಇಂಚಿನ ದೊಡ್ಡ ಟಿವಿ, ಡಿವಿಡಿ ಪ್ಲೇಯರ್ ಮತ್ತು ಅಮೆಜಾನ್ ಮತ್ತು ನೆಟ್ ಫ್ಲಿಕ್ಸ್ subscription ತೆಗೆದುಕೊಂಡು ನನಗೆ ಮಹದುಪಕಾರ ಮಾಡಿ ಕೊಟ್ಟಿದ್ದರಾದರೂ ನನಗೆ B.Ed ವ್ಯಾಸಂಗದ ಕಾರಣದಿಂದ ಯಾವುದೇ ಚಿತ್ರಗಳನ್ನು ನೋಡಲಾಗಿರಲಿಲ್ಲ. ಲಾಕ್ ಡೌನ್ ಬಂದ ನಂತರ ಕೆಲವು ಚಿತ್ರಗಳನ್ನು ಬಹಳ ಆಸಕ್ತಿಯಿಂದ ನೋಡಿದೆ. ಅವುಗಳ ಪಟ್ಟಿಯನ್ನು ಮೊದಲು ನೀಡುತ್ತೇನೆ.

 ಪಾಣಿಪತ್ (ಹಿಂದಿ)
ಸೈರಾ ನರಸಿಂಹ ರೆಡ್ಡಿ (ಮೂಲ:ತೆಲುಗು, ಕನ್ನಡಕ್ಕೆ ಡಬ್ ಆಗಿದೆ)
 ಸೀಕ್ರೆಟ್ ಸೂಪರ್ಸ್ಟಾರ್ (ಹಿಂದಿ)
 ಕೂರ್ಮಾವತಾರ (ಕನ್ನಡ)
 The bridge on the river kwai (English)
 ತಬ್ಬಲಿಯು ನೀನಾದೆ ಮಗನೆ (ಕನ್ನಡ)
ದಿಯಾ (ಕನ್ನಡ)
 ನಮ್ಮ ಗಣಿ ಬಿಕಾಂ Pass (ಕನ್ನಡ)
 ಮಾಯಾಬಜಾರ್ (ಕನ್ನಡ)

 ನಾನು ನೋಡಲು ಆಯ್ಕೆ ಮಾಡಿಕೊಳ್ಳುವ ಚಿತ್ರಗಳು ಕೆಲವರಿಗೆ ವಿಚಿತ್ರವೆನಿಸಿದರೂ ಸಹ ನನ್ನ ಆಯ್ಕೆ ವಿಚಿತ್ರವೆಂದರೆ ನಾನು ಹೇಳಬಯಸುತ್ತೇನೆ. ಕಮರ್ಷಿಯಲ್ಲಾಗಿ ಓಡುವ ಚಲನಚಿತ್ರಗಳು ನನ್ನನ್ನು ಹೆಚ್ಚು ಸೆಳೆಯುವುದಿಲ್ಲ. ಕಮರ್ಷಿಯಲ್ ಆಗಲು ಚಿತ್ರಕ್ಕೆ ಅದರದೇ ಆದ ಕಾರಣಗಳಿರುತ್ತವೆ. ಆದರೆ ಒಂದು ಚಿತ್ರ ಹೇಗೆ ತಯಾರಾಗಿದೆ ಎಂಬುದು ನನ್ನ ಹುಡುಕಾಟವಾಗಿರುತ್ತದೆ. ಹಾಗಾಗಿ ನಾನು ನೋಡಿರುವ ಚಲನಚಿತ್ರಗಳು ಎಷ್ಟೋ ಜನ ಕೇಳಿರದೆ ಹೋಗಲು ಸಾಧ್ಯವಿದೆ. ಮೊದಲನೇ ಚಿತ್ರದ ಅಭಿಪ್ರಾಯವನ್ನು ಬರೆಯುತ್ತಿದ್ದೇನೆ.

 ಚಿತ್ರದ ಹೆಸರು: ಪಾಣಿಪತ್

 ಈ ಚಿತ್ರದ ನಿರ್ದೇಶನ ಆಶುತೋಷ್ ಗೋವಾರಿಕರ್ ಅವರದ್ದು. ಚಿತ್ರವು ಇತಿಹಾಸದ ಪಠ್ಯ ಪುಸ್ತಕವನ್ನು ಓದುವ ಬದಲು ನೋಡಿದಂತಿತ್ತು . ಮೊದಲೇ ಚಿತ್ರವು ಬಹಳ ದೊಡ್ಡದಾದ್ದರಿಂದ (3 hours) ಒಂದೇ ದಿನ ನೋಡುವುದು ಅಸಾಧ್ಯ ಎಂದು ನಾನು ಮನಗಂಡೆ . ಹಾಗಾಗಿ ದಿನಕ್ಕೆ ಅರ್ಧ ಗಂಟೆ ಈ ಚಿತ್ರವನ್ನು ನೋಡಿದೆ. ಮೇಕಿಂಗ್ ಬಹಳ ಅದ್ಭುತವಾಗಿತ್ತು. ಡೀಟೈಲಿಂಗ್ ಅಮೋಘವಾಗಿದೆ. ಆದರೆ ಪಾತ್ರವರ್ಗ ಬಹಳ ನಿರಾಶೆಗೊಳಿಸುತ್ತದೆ. ಮೋನಿ್ಶ್ ಬೆಹ್ಲ್ ಮತ್ತು ಪದ್ಮಿನಿ ಕೊಲ್ಹಾಪುರಿ ಅವರ ನಟನೆ ಹೈಕ್ಲಾಸ್. ಅರ್ಜುನ್ ಕಪೂರ್ ನಿಜಕ್ಕೂ ಬಹಳ ಕಷ್ಟಪಟ್ಟು ಅಭಿನಯಿಸಿದ್ದಾರೆ ಎಂಬುದು ಪ್ರತಿ ಫ್ರೇಮಿನಲ್ಲೂ ಗೊತ್ತಾಗುತ್ತದೆ. ಕೃತಿ ಸನೋನ್ ಎಂಬ ಗ್ಲ್ಯಾಮರ್ ಪ್ಚ್ಚುಫ್ಯಾಕ್ಟರ್ ವರ್ಕ್ ಆಗಿಲ್ಲ. ಸಂಜಯ್ ದತ್ ಆಕ್ಟಿಂಗ್ ಬಹಳ ಪರಿಣಾಮಕಾರಿಯಾಗಿತ್ತು .

 ಈ ಚಿತ್ರವನ್ನು ನೀವು ಒಂದೇ ಸರ್ತಿ ಮೂರು ಗಂಟೆ ಕಾಲ ಕುಳಿತು ನೋಡಿದರೆ ಕಡೆಯಲ್ಲಿ ಏತಕ್ಕಾಗಿ ಈ ಚಿತ್ರ ನೋಡಿದೆ ಎಂಬ ಪ್ರಶ್ನೆ ಉದ್ಭವವಾದರೂ ಆಶ್ಚರ್ಯವಿಲ್ಲ. ನಾನು ಒಂದು ವಾರ ಈ ಚಿತ್ರವನ್ನು ನೋಡಿದ್ದರಿಂದ ಆ ಅರ್ಧ ಗಂಟೆಯನ್ನು ಯಾತಕ್ಕಾದರೂ ಬಳಸಬಹುದಿತ್ತು ಎಂದು ಖಂಡಿತಾ ಅನಿಸಿತ್ತು. ಇತಿಹಾಸವನ್ನು ಬೇರೊಂದು ದೃಷ್ಟಿಕೋನದಿಂದ ನಾವು ನೋಡಬಹುದು ಎಂಬುದನ್ನು ಬಿಟ್ಟರೆ ಚಿತ್ರದಿಂದ ನನಗೆ ಏನೂ ಲಾಭವಾಗಲಿಲ್ಲ.

 ಆಶುತೋಷ್ ಗೋವಾರಿಕರ್ ಅವರಿಗೆ ಬಹಳ ನಷ್ಟವಾಗಿದೆ ಎಂಬುದನ್ನು ಈ ಚಿತ್ರದಿಂದ ನಾವು ಗ್ರಹಿಸಬಹುದು. ಅವರು ಏನೋ ಮಾಡಲು ಹೋಗಿ ಏನೋ ಆಗಿದೆ ಎಂದು ನನಗೆ ಅನಿಸಿದೆ. ಆಶುತೋಷ್ ಗೋವಾರಿಕರ್ ಅವರು ಲಗಾನ್ ಮತ್ತು ಸ್ವದೇಸ್ ನಿರ್ದೇಶನ ಮಾಡಿದ ಮೇಲೆ ನಾನು ಅವರಿಂದ ಮತ್ತಷ್ಟು ಸದಭಿರುಚಿಯ ಮತ್ತು ಚಿಂತನೆಗೆ ಹಚ್ಚುವ ಚಿತ್ರಗಳನ್ನು ಅಪೇಕ್ಷಿಸಿದ್ದೆ. ಪಾಣಿಪತ್ ಸದಭಿರುಚಿಯ ಚಿತ್ರವಾಗಿದ್ದರೂ, ಚಿತ್ರದ ವಿಷಯ ಅತ್ಯಂತ ಗಹನವಾಗಿದ್ದರೂ ,ನಿರೂಪಣಾ ತಂತ್ರ ದಯನೀಯವಾಗಿ ಸೋತಿರುವುದರಿಂದ ಚಿತ್ರವೂ ಖಂಡಿತ ಯಾರ ಮನಸ್ಸಿನಲ್ಲೂ ಉಳಿಯಲಾರದು. ಬಾಕ್ಸಾಫೀಸ್ ನಲ್ಲಿ ಉಳಿಯಿತೋ ಬಿಟ್ಟಿತೋ ನನಗೆ ಗೊತ್ತಿಲ್ಲ.

0 comments:

Post a Comment